ಇಬ್ಬನಿ

April 14, 2008

ರಾಸ್ಕಲ್ ದೇವದಾಸನೂ… ಹೈದ್ರಾಬಾದ್ ಮಳೆಯೂ…..,

Filed under: ಸುಮ್ ಸುಮ್ನೆ — kemmayi @ 12:58 pm
Tags: ,

 

ನಿನ್ನೆ ರಾತ್ರಿ ಇದ್ದಕ್ಕಿದ್ದ ಹಾಗೆ ಸುರಿಯಿತಲ್ಲ, ಪಿರಿಪಿರಿ ಮಳೆ, ಅದ್ಯಾಕೋ ನಾನು ಒಂದು ವರುಷ ಹಿಂದೆ ಹೋಗಿ ಬಿಟ್ಟೆ. ಅಷ್ಟಕ್ಕೆಲ್ಲಾ ಕಾರಣ.. ರಸ್ತೆ ಬದಿಯಲ್ಲಿ ಸುಮ್ಮನೆ ಮುದುಡಿ ಮಲಗಿದ್ದ ನಾಯಿಮರಿ, ಬಿಳಿಯ ಬಣ್ಣದ್ದು. ಅದು ಮಲಗಿದ ಪರಿ ನೋಡಿದರೆ ಥಟ್ಟನೆ ನೆನಪಾಗುತ್ತಿದ್ದದ್ದು  ಮುಂಗಾರು ಮಳೆಯ ಆ ರಾಸ್ಕಲ್ ದೇವದಾಸ.

ಅಷ್ಟಕ್ಕೂ ಇಲ್ಲಿ ಮಳೆ ಬೀಳುವುದೇ ಅಪರೂಪ. ಹೈದ್ರಾಬಾದಿನ ರಸ್ತೆಗಳು  ಮಳೆ ಸಿಂಚನಕ್ಕೆ ಅದೆಷ್ಟು ಕಾದು ಕೂತಿರುತ್ತವೆ ಅಂದ್ರೆ, ಬಿದ್ದ ಹನಿ ಎಲ್ಲಿ ಹೋಗತ್ತೋ ಗೊತ್ತೇ ಆಗುವುದಿಲ್ಲ. ಧರೆ ಅಷ್ಟು ಬೇಗ ಹೀರಿಕೊಳ್ಳತ್ತೆ. ಮಳೆ ಕಾಣದೆ ನಾನಂತೂ ತೀರಾ ಬಂಜರಾಗಿದ್ದೆ – ಭಾವನೆಗಳೇ ಇಲ್ಲದೆ. ನಾನಾದರೂ ಬಂದದ್ದು ಕನ್ನಡ ತಾಯಿಯ ಪ್ರಭಾವಳಿ-ಕರಾವಳಿಯಿಂದ. ಅಲ್ಲಿ ಮಳೆ ಅಂದರೆ ಹಬ್ಬ. ಮೊದಲ ಹನಿ ಬೀಳುವುದಕ್ಕೆ ಹತ್ತು ನಿಮಿಷ ಮೊದಲೇ ಕೇಳಿಸೋ ಭೋ ಅನ್ನೋ ಸದ್ದು, ಅಂಗಳದಲ್ಲಿದ್ದ ಒಣ ಅಡಿಕೆ ತುಂಬಿಸೋ ಒದ್ದಾಟ, ಕಟ್ಟಿಗೆ ಒಟ್ಟಿಗೆ ಟರ್ಪಾಲು ಹೊದಿಸೋ ಧಾವಂತ, ದನಗಳನ್ನು ಹಟ್ಟಿಗೆ ಅಟ್ಟೋ ಆತಂಕ. ಇಷ್ಟೆಲ್ಲಾ ಆದರೂ ಮತ್ತೆ ಮಳೆಯಲ್ಲಿ ನೆನೆಯೋದಿದೆಯಲ್ಲಾ, ಅಬ್ಬಾ ಅದನ್ನು ಅನುಭವಿಸಿಯೇ ತೀರಬೇಕು.

ಅಂತಹ ಊರಲ್ಲಿ ಹುಟ್ಟಿ ಬೆಳೆದ ನನ್ನಂಥ ಮಳೆ-ಭಾವುಕನಿಗೆ ಇಲ್ಲಿ ದಿನಕಳೆಯೋದು ದುಸ್ತರ. ಅಲ್ಲಿ ಗಂಟೆಗಟ್ಟಲೇ… ದಿನವಿಡೀ ಸುರಿಯೋ ಮುಂಗಾರು ಮಳೆಗೂ ಇಲ್ಲಿ ಅಮಾವಾಸ್ಯೆಗೆ ಒಮ್ಮೆ ಮಾತ್ರ – ವರುಷಕ್ಕೆ ಹನ್ನೆರಡೇ ಸಲ ಬರೋ ಮಳೆಗೂ ಅದೆಷ್ಟು ಅಂತರ- ಅಬ್ಬಬ್ಬಾ ಅಂದರೆ ಐದೇ ನಿಮಿಷಕ್ಕೆ ಮಳೆ ಖಲಾಸ್! ನಿಮಗೆ ಆಶ್ಚರ್ಯ ಆಗಬಹುದು, ಛತ್ರಿ ಇಲ್ಲದೆ ನಾನು ಬರಾಬ್ಬರಿ ಮೂರು ಮಳೆಗಾಲ ಕಳೆದಿದ್ದೇನೆ.  ಅಷ್ಟರ ಮಟ್ಟಿಗೆ ಉಳಿತಾಯ!  ಇನ್ ಫ್ಯಾಕ್ಟ್ ಮಳೆಗಾಲ ಯಾವಾಗ ಆರಂಭ ಆಯಿತು ಯಾವಾಗ ಕೊನೆಗೊಂಡಿತು ಅಂತ ಗೊತ್ತೇ ಆಗಲ್ಲ.

ಅಂತಹ ಸ್ಥಿತಿಯಲ್ಲಿದ್ದಾಗ, ನಿನ್ನೆ ಇದ್ದಕ್ಕಿದ್ದ ಹಾಗೆ ಮಳೆ ಸುರಿಯಿತು. ಕರಾವಳಿ-ಮಲೆನಾಡಿನಲ್ಲಿ ಅಂಗಳ ಗುಡಿಸೋವಾಗ ನೀರು ಚಿಮುಕಿಸುತ್ತಾರಲ್ಲ…. ಅಷ್ಟೇ ಅಷ್ಟು ಮಳೆ. ಅಂಥಾ ಮಳೆಗೂ ಪಾಪ ಆ  ಬೆಳ್ಳಗಿನ ಕರಿಮೂತಿಯ ನಾಯಿ ಮರಿ ಬೆದರಿ ಮಲಗಿತ್ತು. ಥೇಟ್ ದೇವದಾಸನ ಥರಾ! ಒಂದೂವರ ವರುಷ ಹಿಂದೆ ನೋಡಿದ ಮುಂಗಾರು  ಮಳೆಯ ಪ್ರತಿ ಫ್ರೇಮ್ ಕೂಡಾ ಹಾಗೆ ಕಣ್ಮುಂದೆ ಬಂದು ಹೋದವು. ನಾನು ಒಂದು ವರುಷ ಹಿಂದೆ ಹೋಗಿದ್ದೆ. ಸುಮ್ಮನೆ ಇಷ್ಟು ನಿಮಗೆ ಹೇಳಬೇಕು ಅನ್ನಿಸ್ತು ಅಷ್ಟೇ.
- ಪ್ರೀತು ಕೆಮ್ಮಾಯಿ
ಬರೆದದ್ದು -ಫೆಬ್ರವರಿ ತಿಂಗಳಿನಲ್ಲಿ

Blog at WordPress.com.